January 16, 2009
ಬೆಂಗಳೂರು, ಜ. 16 : ಮಾಯಾಜಾಲದ ಕಲ್ಪನೆಯನ್ನೂ ಮೀರಿಸುವ ಮಾಯಾಜಾಲವನ್ನು ಅಂತಾರಾಷ್ಟ್ರೀಯ ಖ್ಯಾತಿಯ ಕನ್ನಡಿಗರಾದ ನಕುಲ್ ಶೆಣೈ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಜನವರಿ 18ರ ಸಂಜೆ ಸೃಷ್ಟಿಸಲಿದ್ದಾರೆ. ಹೆಸರೇ ಹೇಳುವಂತೆ ಇದು ‘ಬಿಯಾಂಡ್ ಮ್ಯಾಜಿಕ್’! ಮ್ಯಾಜಿಕ್ ಎಂಬ ಕಲ್ಪನೆಯನ್ನೂ ಮೀರಿದ್ದು.
ನಂಬಲಸಾಧ್ಯವಾದ ಮ್ಯಾಜಿಕ್ ಟ್ರಿಕ್ ಗಳನ್ನು ಪ್ರದರ್ಶಿಸಲಿರುವ ಶೆಣೈ ಅವರ ಕೈಚಳಕವನ್ನು ನೋಡಿಯೇ ನಂಬಬೇಕು. ಏಕೆಂದರೆ, ನೋಡದೆಯೇ ಇವರು ಇಂಥ ಮಾಯಾಜಾಲವನ್ನು ಸೃಷ್ಟಿಸುತ್ತಾರೆಂದು ನಂಬುವುದೂ ಅಸಾಧ್ಯ. ‘ದಿಸ್ ಈಸ್ ಇಂಪಾಸಿಬಲ್, ಇದನ್ನು ಹೇಗೆ ಮಾಡಲು ಸಾಧ್ಯ’ ಎಂದು ಉದ್ಗರಿಸಿದವರಿದ್ದಾರೆ. ‘ಇದೇನು ಮ್ಯಾಜಿಕ್ಕೋ, ಮನಸ್ಸಿನೊಂದಿಗೆ ಆಡುವ ತಂತ್ರಗಾರಿಕೆಯೋ’ ಎಂಬು ಹೇಳಿದವರೂ ಇದ್ದಾರೆ.
ಹೌದು, ನಕುಲ್ ಶೆಣೈ ವೀಕ್ಷಕರ ಮನಸ್ಸಿನೊಂದಿಗೆ ಆಟವಾಡುತ್ತಾರೆ, ಅವರ ಮನದಲ್ಲಿ ಏನು ಹುದುಗಿದೆಯೆಂದು ಬಗೆದು ತೋರಿಸುತ್ತಾರೆ. ಅದ್ಭುತ ಮನರಂಜನೆ ನೀಡುವ ಅವರ ಟ್ರಿಕ್ಕುಗಳು ಮನಕ್ಕೆ ಮುದ ನೀಡುವುದರ ಜೊತೆಗೆ ಸಂವಾದಿಯಾಗಿಯೂ ಇರುತ್ತವೆ. ನಕುಲ್ ಮನಸ್ನನ್ನು ಓದಬಲ್ಲರು, ಭವಿಷ್ಯದಲ್ಲಿ ಏನು ಅಡಗಿದೆ ಎಂಬುದನ್ನೂ ಹೇಳಬಲ್ಲರು ಮತ್ತು ಕಲ್ಪನೆಗೂ ಮೀರಿದ ನೆನಪಿನ ಶಕ್ತಿಯನ್ನು ಪ್ರದರ್ಶಿಸಬಲ್ಲರು.
ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಅಚ್ಚ ಕನ್ನಡಿಗ ನಕುಲ್ ಶೆಣೈ ಇಲ್ಲಿಯವರೆಗೆ ಭಾರತದ ಮತ್ತು ಅಂತಾರಾಷ್ಟ್ರೀಯ ಕಂಪನಿಗಳಿಗೆ ಮಾತ್ರ ಜಾದೂ ಪ್ರದರ್ಶನ ನೀಡುತ್ತಿದ್ದರು. ಏಷ್ಯಾ, ಅಮೆರಿಕಾ, ಯುರೋಪ್, ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಪೋರೇಟ್ ವಲಯಗಳಲ್ಲಿ ಇಂದ್ರಜಾಲ ಪ್ರದರ್ಶಿಸಿರುವ ಶೆಣೈ ಈಗ ಪ್ರಪ್ರಥಮ ಬಾರಿಗೆ ಸಾರ್ವಜನಿಕರೆದುರು ಸೈಕಿಕ್ ಮಾಯಾಜಾಲವನ್ನು ತೆರೆದಿಡುತ್ತಿದ್ದಾರೆ.
ನೆನಪಿರಲಿ, ಈ ಶೋ ಕೇವಲ ಆಹ್ವಾನಿತರಿಗೆ ಮಾತ್ರ! ಕೆಲವೇ ಕೆಲವು ಟಿಕೆಟ್ಟುಗಳನ್ನು ಮಾರಲಾಗುತ್ತಿದೆ. ಪ್ರದರ್ಶನವಿರುವುದು ಚೌಡಯ್ಯ ಸ್ಮಾರಕ ಭವನದಲ್ಲಿ ಜನವರಿ 18ರಂದು. ಆಸಕ್ತರು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಿಲಾಯನ್ಸ್ ಟೈಮ್ ಔಟ್ ನಲ್ಲಿ ಟಿಕೆಟ್ ಪಡೆಯಬಹುದು.
ಮತ್ತೊಮ್ಮೆ ಗಮನಿಸಿ
ಸ್ಥಳ : ಚೌಡಯ್ಯ ಸ್ಮಾರಕ ಭವನ, ಗಾಯತ್ರಿ ದೇವಿ ಪಾರ್ಕ್ ಎಕ್ಸ್ ಟೆನ್ಶನ್, 16ನೇ ಅಡ್ಡರಸ್ತೆ, ವೈಯಾಲಿಕಾವಲ್, ಬೆಂಗಳೂರು
ದಿನಾಂಕ : ಭಾನುವಾರ, ಜನವರಿ 18
ಸಮಯ : ಸಂಜೆ 6.30
ಕಾಲಾವಧಿ : ಒಂದು ಗಂಟೆ
(ದಟ್ಸ್ ಕನ್ನಡ ವಾರ್ತೆ)
ನಕುಲ್ ಶೆಣೈ ಅಂತರ್ಜಾಲ ತಾಣ : http://www.nakulshenoy.com/
Note: Article reproduced from OneIndia.com: ಒನ್ ಇಂಡಿಯಾ: ಜನವರಿ 18ರಂದು ನಕುಲ್ ಶೆಣೈ ಜಾದೂ ಪ್ರದರ್ಶನ